ಮೀನಾಕುಮಾರಿ
	1932-1972. ಕರುಣ ರಸಾಭಿನಯ ಕುಶಲೆ. ಕುರಂತ ಪಾತ್ರಗಳಿಗೆ ವಿಶಿಷ್ಟ ಆಯಾಮ ನೀಡಿದ ಹಿಂದಿ ಚಿತ್ರಜಗತ್ತಿನ ಅಭಿನೇತ್ರಿ. ತಂದೆ ಪಾರ್ಸಿ ರಂಗಭೂಮಿಯ ನಟ, ಗಾಯಕ. ತಾಯಿ ನಟಿ, ನರ್ತಕಿ. ಹುಟ್ಟಿದ್ದು ಮುಂಬೈನಲ್ಲಿ. 1932ರ ಆಗಸ್ಟ್ 1ರಂದು. ರೂಪಾತಾರಾ ಸ್ಟುಡಿಯೋ ಪರಿಸರದಲ್ಲಿ ಬೆಳೆದದ್ದು. ಕಲಿತದ್ದು ಉರ್ದು. ತಂದೆತಾಯಿಗಳು ಪ್ರೀತಿಯಿಂದ ಇಟ್ಟ ಹೆಸರು ಮಹಜಬೀನ್. ಕುಟುಂಬದ ಅವಶ್ಯಕತೆ ಪೂರೈಸಲು ಆರು ವರ್ಷದ ಬಾಲೆಯು ಚಿತ್ರರಂಗ ಪ್ರವೇಶ. ಮೊದಲ ಚಿತ್ರ ಲೆದರ್ ಫೇಸ್ ಈ ಪುಟ್ಟತಾರೆಗೆ ವಿಜಯಾಭಟ್ ಇಟ್ಟ ಹೆಸರು ಬೇಬಿ ಮೀನಾ. ವಿಜಯಾಭಟ್ ಅವರ ಏಕ್ ಹಿಭೂಲ್ (1940) ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ಬೇಬಿ ಮೀನಾ ಅಭಿನಯಿಸಿದ ಚಿತ್ರಗಳು ಪೂಜಾ, ಪ್ರತಿಜ್ಞಾ, ನಯಿ ರೋಷನಿ, ಗರೀಬಿ, ಪ್ರತಿಜ್ಞಾ, ಲಾಲ್ ಹವೇಲಿಗಳಲ್ಲಿ. ಹಾಸ್ಯನಟ ಆಘಾ ಜೊತೆಯಲ್ಲಿ ಬಚ್ಚೊಂಕಿ ಖೇಲ್(1946) ಚಿತ್ರದಲ್ಲಿ ಅಭಿನಯಿಸಿದಾಗ 14 ವರ್ಷದ ಕಿಶೋರಿ, ಯೌವನಾವಸ್ಥೆಗೆ ಕಾಲಿಡುತ್ತಿದ್ದಾಗ ಮೀನಾಕುಮಾರಿಗೆ ದೊರೆತದ್ದು ಪೌರಾಣಿಕ ಚಿತ್ರಗಳು. ವೀರಘಟೋತ್ಗಜ(1949), ಹನುಮಾನ್ ಪಾತಾಳ್ ವಿಜಯ್, ಶ್ರೀ ಗಣೇಶ್ ಮಹಿಮಾ(1950) ಮೊದಲಾದವು. `ಅಲ್ಲಾವುದ್ದೀನ್ ಅದ್ಭುತ ದೀಪ(1952) ಚಿತ್ರದಲ್ಲಿ ಮೀನಾಕುಮಾರಿ-ಮಹಿಪಾಲ್ ಜೋಡಿ ಜನಮೆಚ್ಚುಗೆ ಗಳಿಸಿತು. ಹದಿನೆಂಟರ ಚೆಲುವೆ ಮೀನಾಕುಮಾರಿ, ದೇವಾನಂದ್ ಮತ್ತು ಅಶೋಕ್ ಕುಮಾರ್ ಜೊತೆಯಲ್ಲಿ ಅಭಿನಯಿಸಿದ ತಮಾಷ (1952) ಯಶಸ್ವಿಯಾಗಲಿಲ್ಲ. ಆದರೆ ಅದೇ ವರ್ಷ ಅಕ್ಟೋಬರ್‍ನಲ್ಲಿ ಬಿಡುಗಡೆಯಾದ ಬೈಜಾಬಾವರ ಅಪೂರ್ವ ಯಶಸ್ಸು ಗಳಿಸಿತು. `ಶ್ರೇಷ್ಠ ನಟಿ' ಎಂಬ ಪ್ರಶಸ್ತಿಯೂ ದಕ್ಕಿತು. ಭಾರತದ ಪಂಚ ಮಹಾ ಅಭಿನೇತ್ರಿಯರಲ್ಲಿ ಒಬ್ಬರೆಂದು ಮಾನ್ಯತೆ ಪಡೆದರು. ಬೈಜ ಭಾರತದ ಪ್ರಸಿದ್ಧ ಸಂಗೀತಗಾರ. ಈ ಚಿತ್ರದಲ್ಲಿ ಬೈಜಾವನ್ನು ಪ್ರೀತಿಸುವ ಹೆಣ್ಣಿನ ಪಾತ್ರ ಮೀನಾಕುಮಾರಿಯದು. ವಿರಹದ ನೋವಿನಿಂದ ಬೈಜಾವಿನ ಸಂಗೀತ ಶ್ರೀಮಂತವಾಗಲಿ, ಆತ ಕೀರ್ತಿವಂತನಾಗಲಿ ಎಂದು ಆತನಿಂದ ದೂರ ಸರಿಯುತ್ತಾಳೆ. ತಾನು ಪ್ರೀತಿಸುವವನ ಯಶಸ್ವಿಗಾಗಿ ತನ್ನ ಸುಖ ಸಂತೋಷಗಳನ್ನು ಬಲಿದಾನ ಮಾಡುತ್ತಾಳೆ. ಈ ಚಿತ್ರದ ಯಶಸ್ಸು ಮೀನಾಕುಮಾರಿಯ ಚಲನಚಿತ್ರ ಜೀವನದಲ್ಲಿ ಮುಖ್ಯ ಘಟ್ಟ. ತಮ್ಮ 33 ವರ್ಷಗಳ ತಾರಾಜೀವನದಲ್ಲಿ 86ಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರ ವಹಿಸಿದ್ದಾರೆ. ಪೌರಾಣಿಕ ಜಾನಪದ ಚಿತ್ರಗಳಲ್ಲದೆ, ಆಜಾದ್(1955) ಮಿಸ್ ಮೇರಿ(1957) ಶರಾರತ್(1959) ಕೊಹಿನೂರ್(1969) ಮೊದಲಾದ ಕೆಲವು ಮನರಂಜನಾ ಚಿತ್ರಗಳಲ್ಲಿ, ಉಲ್ಲಾಸಮಯವಾಗಿ, ರಂಜನೀಯವಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಬೈಜಾ ಬಾವರ್‍ನಂತಹ ಹೆಣ್ಣಿನ ದೈಹಿಕ ಶ್ರೀಮಂತಿಕೆಯನ್ನು ಮೆರೆಸುವುದಕ್ಕಿಂತ ಹೃದಯ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಚಿತ್ರಗಳು ಅವರಿಗೆ ಕೀರ್ತಿಪ್ರತಿಷ್ಠೆ ತಂದವು. ಆದರ್ಶಪತ್ನಿಯಾಗಿ, ಆದರ್ಶ ಮಾತೆಯಾಗಿ, ನಿರ್ಮಲ ಪ್ರೇಮಿ, ತ್ಯಾಗ, ಬಲಿದಾನಗಳ ಸುತ್ತ ಹೆಣೆದ ಪಾತ್ರಗಳ ಸಮರ್ಥ ನಿರ್ವಹಣೆ, ಅದಕ್ಕೆ ತಮ್ಮದೇ ಆದ ಛಾಪು ನೀಡಿದರು. ಬಿಮಲ್ ರಾಯ್ ನಿರ್ದೇಶನದ `ಪರಿಣೀತಾ(1957) ಒಂದು ಸಂಕೀರ್ಣ ಬಾಂಧವ್ಯದ ಚಿತ್ರ. ಅಶೋಕಕುಮಾರನನ್ನು ರಹಸ್ಯವಾಗಿ ವರಿಸಿದ ಮೀನಾ, ತನ್ನನ್ನು ಪೋಷಿಸಿದ ಚಿಕ್ಕಪ್ಪನ ಋಣ ಬಾಧೆ ತೀರಿಸಲು, ನಾಯಕನ ತಂದೆಯನ್ನೇ ವರಿಸಬೇಕಾದಂತಹ ವಿಷಮ ಸನ್ನಿವೇಶ. ಸಂಶಯಗಳ ಸುಳಿ, ಸತಿಧರ್ಮಪಾಲನೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಾದ ಪ್ರಸಂಗ. ಏಕಾಂತ ಜೀವನ, ಆಸೆ ಆಕಾಂಕ್ಷೆಗಳ ದಮನ. ಶಾರದಾ(1957) ತಾನು ಹೃದಯಪೂರ್ವಕವಾಗಿ ಪ್ರೀತಿಸಿದ ರಾಜಕಪೂರನ ಮಲತಾಯಿಯಾಗಬೇಕಾದ ಜಟಿಲ ಪ್ರಸಂಗದ ಕಥಾವಸ್ತು. ದಾಯಿದಾ(1953), ಏಕ್ ಹಿರಾನ್ರಾ(1956), ದಿಲ್ ಅಪನಾ ಔರ್ ಪ್ರೀತ್ ಪರಾಯಿ(1960)-ಇವೆಲ್ಲಾ ಕಣ್ಣೀರಿನ ಕೋಡಿ ಹರಿಸುತ್ತಾ, ಅಗ್ನಿಪರೀಕ್ಷೆಗೆ ಒಳಗಾಗುವ ಆದರ್ಶನಾರಿಯ ವಿವಿಧ ರೂಪಗಳ ಅನಾವರಣಗೊಳಿಸುವ ಚಿತ್ರಗಳು.

	ಮೀನಾಕುಮಾರಿಯ ಅಭಿನಯಕ್ಕೆ ಮುಕುಟಪ್ರಾಯವಾದ ಚಿತ್ರಗಳು ಗುರುದತ್ ಅವರ ಸಾಹೀಬ್ ಬೀಬಿ ಔರ್ ಗುಲಾಂ(1962) ಮತ್ತು ಕಮಲ್ ಅಮರೋಹಿ ಅವರ ಪಾಕೀಜ(1972) ಚಿತ್ರಗಳು. ಹಿಂದಿನ ಕಾಲದ ಬಂಗಾಳದ ಶ್ರೀಮಂತ ಜಮೀನ್ದಾರ ಮನೆತನದ ಕಿರಿಯ ಸೊಸೆ-ಸಾವಿತ್ರ(ಮೀನಾಕುಮಾರಿ) ಛೋಟೆಬಾಬು(ರೆಹಮಾನ್) ಮನೆಯಲ್ಲಿ ರತಿಯಂತಹ ಪತ್ನಿ ಇದ್ದರೂ ವೇಶ್ಯಾಗೃಹದತ್ತ ಸೆಳೆತ. ದಾರಿತಪ್ಪಿದ ಪತಿಯನ್ನು ಆಕರ್ಷಿಸಲು ಆಕೆ ತನ್ನ ಧರ್ಮ, ಸಂಪ್ರದಾಯಗಳನ್ನು ಮೀರಿ ವೇಶ್ಯಯಂತೆ ರಮಿಸುತ್ತಾಳೆ. ನರ್ತಿಸುತ್ತಾಳೆ, ವಾದಿರಾ ಸೇವನೆಗೆ ಸಿದ್ಧವಾಗುತ್ತಾಳೆ. ವಿರಹೋತ್ಕಂಠೆಯಾಗಿ ಆತನಲ್ಲಿ ನಿರ್ಲಜ್ಜೆಯಿಂದ ಪ್ರೇಮ ಭಿಕ್ಷೆ ಬೇಡುತ್ತಾಳೆ. ಆದರೂ ಪರಿತ್ಯಕ್ತೆ, ಕೈಯಲ್ಲಿ ವಾದಿರಾ ಪಾತ್ರೆ, ಹೃದಯದಲ್ಲಿ ಮಡುಗಟ್ಟಿದ ನಿರಾಶೆ, ವೇದನೆ, ಕಣ್ಣಾಲಿಗಳಲ್ಲಿ ತುಂಬಿ ತುಳುಕುವ ಕಣ್ಣೀರು. ಕಂಪಿಸುವ ತುಟಿಗಳಿಂದ ಹೊಮ್ಮುವ ವೇದನಾಪೂರ್ಣ ಸ್ವರ, ಪ್ರೇಮ ಭಿಕ್ಷೆ, ಹೃದಯ ಕಲುಕುವ ದೃಶ್ಯ. ಅವರ ಈ ಒಂದು ನೋಟ ಸಾವಿರ ಮಾತಿಗೆ ಸಮ. ಅಭಿನಯ ಶಾಸ್ತ್ರಜ್ಞರು ಪ್ರಸ್ತಾಪಿಸುವ ಅಭಿಸಾರಿಕ, ವಿಪ್ರಿಲಬ್ಧೆ, ವಿರಹೋತ್ಕಂಠಿತೆ ಎಂಬ ನಾಯಿಕಾಭಾವಗಳನ್ನೆಲ್ಲಾ ವ್ಯಾಖ್ಯಾನಿಸಬಹುದಾದ ಉತ್ಕøಷ್ಟ ಅಭಿನಯ.

	`ಪಾಕೀಜಾ(1972) ಮೀನಾರವರ ಬದುಕಿನ ಹಂಸಗೀತೆ. ವಾಚನಾಲಿಗಳ ಕೋಠಿಯಲ್ಲಿ ಬೆಳೆದ ಕೆಸರಿನ ಕಮಲ. ಶುದ್ಧ ನಿರ್ಮಲ ಪ್ರೇಮಕ್ಕಾಗಿ ಪರಿತಪಿಸುವ ಒಬ್ಬ ನಾಚ್ ನಾರಿಯ ಕತೆ. `ಚಲೊ ದಿಲ್ದಾರ್ ಚಲೋ ಚಾಂದ್ ಕೆ ಪಾರ್ ಚಲೊ (ಮನದನ್ನೆ ನಡೆ ಹೋಗೋಣ, ಚಂದಿರನ ದಾಟಿ ಹೋಗೋಣ' ಎಂದು ಹಾಡಿದರೆ, `ಮೈ ಭಿ ತಯಾರ್- ನಾನು ಸಿದ್ಧನಾಗಿದ್ದೀನಿ ಎಂದು ಮೀನಾ ದನಿಗೂಡಿಸುತ್ತಾರೆ. ನಿರ್ಮಲ ಪ್ರೀತಿಗಾಗಿ ಹವಿಹವಿಸುವ ನಾಚನಾಲಿಯಾಗಿ ಜೀವನದುದ್ದಕ್ಕೂ ನಿರ್ಮಲ ಪ್ರೀತಿಗಾಗಿ ಹಂಬಲಿಸುವ ತಾರೆಯ ಹಂಸಗೀತೆ. ಮೀನಾಕುಮಾರಿ ತಾವು ಅಭಿನಯಿಸುವ ಪಾತ್ರಗಳಲ್ಲಿ ಜೀವ ತುಂಬುತ್ತಿದ್ದರು. ಅವರ ಬದುಕಿನ ಘಟನೆಗಳ ಪ್ರತಿಛಾಯೆಯನ್ನು ಅವರ ಚಿತ್ರಗಳಲ್ಲಿ ವಿಮರ್ಶಕರು ಗುರುತಿಸುತ್ತಾರೆ. ಮೀನಕುಮಾರಿ 1952ರಲ್ಲಿ ನಿರ್ಮಾತ, ನಿರ್ದೇಶಕ ಕಮಲ್ ಅಮರೋಹಿ ಅವರನ್ನು ಪ್ರೀತಿಸಿ ಅವರ ಎರಡನೆಯ ಮಡದಿಯಾದರು. ಆದರೆ ವೈವಾಹಿಕ ಬದುಕು ಸುಗಮವಾಗಿರಲಿಲ್ಲ. 1964ರಲ್ಲಿ ವಿಚ್ಛೇದನ ಪಡೆದರು. ಪಾಕೀಜಾ ಚಿತ್ರದ ಕರಡು ಸಿದ್ಧವಾದದ್ದು 1960ರಲ್ಲಿ. ಈ ಚಿತ್ರ ಮೀನಾಕುಮಾರಿ ಕಲ್ಪನೆ ಕೂಸು 1969ರಲ್ಲಿ ಗಂಡನಿಂದ ದೂರವಾದರೂ, `ಪಾಕೀಜಾ ಚಿತ್ರ ಪೂರ್ಣಗೊಳಿಸಲು ಸಹಕರಿಸಿದರು. 1971ರ ಕೊನೆಯ ವೇಳೆಗೆ ಚಿತ್ರೀಕರಣ ಮುಕ್ತಾಯವಾಯಿತು. 15 ವರ್ಷಗಳ ಸುದೀರ್ಘ ಕಾಲದ ಈಸ್ಟ್‍ಮನ್ ವರ್ಣದ ಒಂದೂವರೆ ಕೋಟಿ ರೂಪಾಯಿ ವೆಚ್ಚದ ಸಿನಿಮಾಸ್ಕೋಪ್ ಪಾಕೀಜಾ ತೆರೆಗೆ ಸಿದ್ಧವಾಯಿತು. ಯಶಸ್ವಿಯಾಯಿತು. ಪಾಕೀಜಾದೊಂದಿಗೆ ಮೀನಾಳ ಬಾಳಿನ ಚಿತ್ರಣವೂ ಕೊನೆಗೊಂಡಿತು. 1972ರ ಮಾರ್ಚ್ 31ರಂದು ಮುಂಬಯಿಯಲ್ಲಿ ಮೀನ ಆಸ್ಪತ್ರೆಯಲ್ಲಿ ಕಾಲವಾದರು.
	ಮೀನಾ ತಾಯಿಯ ಪಾತ್ರದಲ್ಲೂ ಶೋಭಿಸಿದ್ದಾರೆ. ಪ್ರೀತಿಯ ಅತ್ತಿಗೆಯಾಗಿ ಭಾಭಿಕಿ ಜುಡಿಯಾ(1961) ಅನಾಥ ಮೈದುನನ ಪ್ರೀತಿಯ ಅತ್ತಿಗೆಯಾಗಿ, ದುಷ್ಮನ್(1971) ಪತಿಯನ್ನು ಕೊಂದ ಪಾತಕಿಯನ್ನು ಸತ್ಪ್ರಜೆಯಾಗಿ ಪರಿವರ್ತಿಸುವ ಕ್ಷಮಾವರ್ತಿಯಾಗಿ, `ಮೇರೆ ಅಪ್ನ-ನಗರದ ನೆಮ್ಮದಿ ಹಾಳುಗೆಡುವುತ್ತಿದ್ದ ಎರಡು ಗುಂಪುಗಳ ನಡುವೆ ಸಾಮರಸ್ಯ ಮೂಢಿಸಿದ ಮಾತೆಯಾಗಿ ಅಭಿನಯಿಸಿದ್ದಾರೆ. ಯಾವುದೇ ಪಾತ್ರವಾಗಲಿ, ಅದರಲ್ಲಿ ತಲ್ಲೀನರಾಗಿ, ಅದ್ಭುತ ಅಭಿನಯ ನೀಡುತ್ತಿದ್ದರು. ಕರುಣಾರಸಾಭಿನಯ ಚತುರೆಗೆ `ದುರಂತ ಪಾತ್ರಗಳ ಸಾಮ್ರಾಜ್ಞಿ ಎಂದು ಪಟ್ಟ ಕಟ್ಟಿದರು. ಆಕೆಗೆ ಆಕೆಯೇ ಸಾಟಿ.
	ಮೀನ ಕವಿ ಹೃದಯದ ಹೆಣ್ಣು. ಉರ್ದು ಕವಯಿತ್ರಿ `ನಾಜ್ ಕಾವ್ಯನಾಮ `ತನಹಾ ಚಾಂದ್ ಕವಿತಾ ಸಂಕಲನ, ಅವರ ಮರಣಾನಂತರ ನಿರ್ದೇಶಕ ಗುಲ್ಜಾರ್ ಸಂಪಾದಿಸಿ ಪ್ರಕಟಿಸಿದರು. ಅವರ ಕವಿತಾವಾಚನದ ಧ್ವನಿಮುದ್ರಿಕೆಯೂ ಜನಪ್ರಿಯ.
									
(ಎನ್.ಎಸ್.ಎಸ್.ವಿ; ಎಂ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ